ಕನ್ನಡ ನಾಡು | Kannada Naadu

ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಖಜಾನೆ – 2  ಡಿಬಿಟಿ ಇಂಟಿಗ್ರೇಷನ್ ಮೂಲಕ ಪಾವತಿಸಲಾಗುತ್ತಿದೆ : ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಓ.ಪಿ.ಎಸ್. ಜಾರಿಗೆ ಸರ್ಕಾರ ಅಗತ್ಯ ಕ್ರಮ ವಹಿಸುತ್ತಿದೆ ಎಂದ ಸಚಿವ ಎನ್.ಎಸ್. ಭೋಸರಾಜು

13 Mar, 2025

 

ಬೆಂಗಳೂರು : ಪ್ರಸ್ತುತ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಖಜಾನೆ 2 ಡಿಬಿಟಿ ಇಂಟಿಗ್ರೇಷನ್ ಮೂಲಕವೇ ಪಾವತಿ ಮಾಡಲಾಗುತ್ತಿದೆ ಇದು 38 ವ್ಯಾಲಿಡೇಷನ್ ಗೆ ಒಳಪಡುವುದರಿಂದ ಒಂದಕ್ಕಿಂತ ಹೆಚ್ಚು ಬಾರಿ ಪಾವತಿಯಾಗುವುದಿಲ್ಲ ಎಂದು ಮುಖ್ಯಮಂತ್ರಿಗಳ ಪರವಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರು ಹಾಗೂ ಸಭಾನಾಯಕರಾದ ಎನ್.ಎಸ್. ಭೋಸರಾಜು ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿಧ ಯೋಜನೆಗಳಡಿಯಲ್ಲಿ ಸಂಬಂಧಪಟ್ಟ ಇಲಾಖೆಗಳು ಆಯ್ಕೆಗೊಂಡ ಫಲಾನುಭವಿಗಳಿಗೆ ವಿವರಗಳನ್ನು ಅಗತ್ಯ ಪರಿಶೀಲನೆಯ ನಂತರ ಇ-ಆಡಳಿತ ಇಲಾಖೆಯ ಡಿಬಿಟಿ ಪೋರ್ಟಲ್ ಮೂಲಕ ಪಾವತಿಗಾಗಿ ಖಜಾನೆ  - 2 ಕ್ಕೆ ಬಿಲ್ಲು ಸಲ್ಲಿಸುತ್ತಾರೆ. ಇಲಾಖಾ ಡಿ.ಡಿ.ಓಗಳು ಖಜಾನೆ  - 2 ರಲ್ಲಿ ಸೃಜಿಸಿ ಖಜಾನೆಗೆ ಸಲ್ಲಿಸಲಾದ ಬಿಲ್ಲುಗಳನ್ನು ಪರಿಶೀಲಿಸಿ ತೀರ್ಣಗೊಳಿಸಲಾಗುತ್ತದೆ. ಒಂದು ಯೋಜನೆಯ ಫಲಾನುಭವಿಗೆ ಒಂದೇ ಮಾಹೆಗೆ ಒಂದಕ್ಕಿಂತ ಹೆಚ್ಚು ಬಾರಿಗೆ ಪಾವತಿಯಾಗದಂತೆ ಕ್ರಮ ವಹಿಸಲಾಗಿದೆ.  ಖಜಾನೆ – 2 ತಂತ್ರಾಂಶದ ಮೂಲಕ ಇಲಾಖೆಯು ಸಾರ್ವಜನಿಕರು / ನೌಕರರಿಗೆ ಮತ್ತು ಇತರೆ ವ್ಯಕ್ತಿಗಳಿಗೆ ಯಾವುದೇ ಮೊತ್ತವನ್ನು ಉಚಿತವಾಗಿ ಪಾವತಿಸುತ್ತಿಲ್ಲ ಎಂದು ತಿಳಿಸಿದರು.

ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ನಾಡಕಛೇರಿಗಳಲ್ಲಿ ಮಂಜೂರು ಮಾಡುವ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಲಾಗಿದ್ದ ಕಾರಣ ಒಂದೇ ಖಾತೆಗೆ ಹಲವು ಪಿಂಚಣಿದಾರರ ಪಿಂಚಣಿ ಖಜಾನೆ ಮುಖಾಂತರ ಜಮೆ ಆಗಿರುವುದನ್ನು ದಿನಾಂಕ:27-03-2019 ರಂದು ನಡೆದ ಸಭೆಯಲ್ಲಿ ಗಮನಿಸಲಾಗಿದೆ. ಈ ರೀತಿ ವಿವಿಧ ಜಿಲ್ಲೆಗಳ ಒಟ್ಟು 7371 ಫಲಾನುಭವಿಗಳಿಗೆ ಪಾವತಿಯಾಗಿದ್ದ ಹೆಚ್ಚುವರಿ ಮೊತ್ತ ರೂ 3,01,31,291/- ಗಳನ್ನು ವಸೂಲಿ ಮಾಡಿ ಸಂಚಿತ ನಿಧಿಗೆ ಜಮೆ ಮಾಡಲಾಗಿದೆ. ಇದಲ್ಲದೆ ಖಜಾನೆ – 1 ರಿಂದ ಖಜಾನೆ – 2 ಕ್ಕೆ ಪಿಂಚಣಿ ದಾಖಲೆಗಳ ವರ್ಗಾವಣೆ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ಸಂಬಂಧಿಸಿದ 44964 ಫಲಾನುಭವಿಗಳಿಗೆ ಅಕ್ಟೋಬರ್ 2018 ರಿಂದ ಡಿಸೆಂಬರ್ 2018ರ ವರೆಗೆ ಖಜಾನೆ  - 1 ಮತ್ತು ಖಜಾನೆ  - 2 ಎರಡೂ ಕಡೆ ಪಾವತಿಯಾಗಿದ್ದು, ಅಂತಹ ಹೆಚ್ಚುವರಿ ಪಾವತಿಗಳನ್ನು ಸದರಿ ಫಲಾನುಭವಿಗಳಿಗೆ ಮುಂದಿನ ಮೂರು ತಿಂಗಳುಗಳ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸುವ ಮೂಲಕ ಸಂಪೂರ್ಣವಾಗಿ ವಸೂಲಿ ಮಾಡಲಾಗಿರುತ್ತದೆ ಎಂದು ತಿಳಿಸಿದರು.

ಯಾವುದೇ ಯೋಜನೆಯ ಫಲಾನುಭವಿಗಳನ್ನು ನಿಗದಿತ ಮಾನದಂಡಗಳ ಪ್ರಕಾರ ಆಯ್ಕೆ ಮಾಡುವ ಹಾಗೂ ಮಂಜೂರಾತಿ ನೀಡುವ ಪ್ರಕ್ರಿಯೆ ಸಂಬಂಧಪಟ್ಟ ಇಲಾಖೆ ಹಂತದಲ್ಲಿಯೇ ನಡೆಯುತ್ತದೆ. ಈ ರೀತಿ ಆಯ್ಕೆಗೊಂಡ ಫಲಾನುಭವಿಗಳ ವಿವರಗಳನ್ನು ಅಗತ್ಯ ಪರಿಶೀಲನೆಯ ನಂತರ ಇ-ಆಡಳಿತ ಇಲಾಖೆಯ ಡಿ.ಬಿ.ಟಿ ಪೋರ್ಟಲ್ ಮೂಲಕ ಪಾವತಿಗಾಗಿ ಖಜಾನೆ – 2ಕ್ಕೆ ರವಾನಿಸಲಾಗುತ್ತದೆ. ಆದ್ದರಿಂದ ಅರ್ಹರಲ್ಲದ ಫಲಾನುಭಿಗಳಿಗೆ ಹಣ ಪಾವತಿಸುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

   ಅದರಂತೆ  ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು (ಓ.ಪಿ.ಎಸ್) ಜಾರಿ ಮಾಡುವ ಸಾಧ್ಯತೆಗಳ ಕುರಿತು ಸರ್ಕಾರ ಅಗತ್ಯ ಕ್ರಮವಹಿಸುತ್ತಿದೆ ಎಂದು ಮುಖ್ಯಮಂತ್ರಿಗಳ ಪರವಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರು ಹಾಗೂ ಸಭಾನಾಯಕರಾದ ಎನ್.ಎಸ್. ಭೋಸರಾಜು ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಓಪಿಎಸ್ ಜಾರಿ ಮಾಡಲು ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಲು ಈಗಾಗಲೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ:   11-12-2018 ಮತ್ತು 01-03-2023 ರ ಸರ್ಕಾರಿ ಆದೇಶಗಳನ್ವಯ ರಚಿಸಲಾಗಿರುವ ಸಮಿತಿಯನ್ನು ದಿನಾಂಕ: 16-08-2024ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಪುನರ್ ರಚಿಸಿ ಆದೇಶಿಸಲಾಗಿದೆ.  ಸಮಿತಿಗೆ ಹಿಂದಿನ ಡಿಪೈನ್ಡ್ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಿದೆ. ಸದರಿ ಸಮಿತಿಯು ಈಗಾಗಲೇ ಎರಡು ಸಭೆಗಳನ್ನು ಸಹ ನಡೆಸಿದೆ. ವರದಿಯನ್ನು ಸಲ್ಲಿಸಲು ಸಮಿತಿಗೆ ಯಾವುದೇ ಕಾಲಮಿತಿಯನ್ನು ನಿಗಧಿಪಡಿಸಿರುವುದಿಲ್ಲ. ಸಮಿತಿಯು ವರದಿಯನ್ನು ಸಲ್ಲಿದ ಕೂಡಲೇ ವರದಿಯನ್ನು ಪರಿಶೀಲಸಿ ಆದಷ್ಟು ಬೇಗ ಓ.ಪಿ.ಎಸ್. ಜಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by